ಕಾಶಿಕ್ಷೇತ್ರ

 ಇಲ್ಲಿ ಕಾಶಿ ಎಂಬ ಪವಿತ್ರಕ್ಷೇತ್ರದ ಕಿರುಪರಿಚಯವಿದೆ. ಕಾಶಿ/ವಾರಾಣಸಿ ಎಂಬ ನಗರದ ಬಹುಮುಖ ಬೆಳೆವಣಿಗೆ, ಸಂಸ್ಕøತಿ (ವಿದ್ಯೆ, ಕಲೆ, ಸಂಗೀತ ಇತ್ಯಾದಿ)ಗಳ ವಿವರಣೆಗೆ    (ನೋಡಿ- ವಾರಾಣಸಿ)

 ಕಾಶಿ ಹಿಂದಿನ ಕಾಲದಲ್ಲಿ ಪ್ರಸಿದ್ಧವಾಗಿದ್ದ ಸಪ್ತಪುರಿಗಳಲ್ಲಿ ಒಂದು ಮುಖ್ಯ ಹೆಸರು. ಕಾಶಿಗೆ ಆನಂದ ಕಾನನ, ಅವಿಮುಕ್ತ ಕ್ಷೇತ್ರ, ವಾರಾಣಸಿ ಎಂಬ ಹೆಸರುಗಳೇ ಅಲ್ಲದೆ ಇನ್ನೂ ಅನೇಕ ಹೆಸರುಗಳಿವೆ-ಮಹಾಸ್ಮಶಾನ, ಶಂಕರಪುರಿ, ಶಿವಪುರಿ, ರುದ್ರವಾಸ, ಶಿವರಾಜಧಾನಿ, ಗೌರಿಮುಖ, ಆನಂದರೂಪ, ಮೋಕ್ಷ ಪ್ರಕಾಶಿಕಾ, ಮಹಾಪುರಿ, ಧರ್ಮಕ್ಷೇತ್ರ, ಶ್ರೀನಗರಿ, ತಪಸ್ಥಲಿ ಮತ್ತು ಅಪೂರ್ಣಭಾವಾಭಾವ ಭೂಮಿ. ಬೌದ್ಧಗ್ರಂಥಗಳು ಕಾಶಿಯನ್ನು ಕಾಸಿನಗರ, ಕಾಸಿಪುರ, ಕಾಸಿಗ್ರಾಮ, ಬಾರಾನಸಿ, ಸುರಂಧನ, ಸುದರ್ಶನ, ಬ್ರಹ್ಮವದ್ದನ, ಪುಷ್ಪವತಿ, ರಮ್ಯನಗರ, ಮೌಲಿನಿ, ಕೇತುಮತಿ, ಜಿತ್ವಾರಿ ಮತ್ತು ಜಯನಶೀಲ ಎಂದೆಲ್ಲಾ ಕರೆದಿವೆ. ಇವೇ ಅಲ್ಲದೆ ಪೋಥಲಿ, ಅಲರ್ಕಪುರಿ ಮತ್ತು ಬನಾರಸ್ ಎಂಬ ಹೆಸರುಗಳೂ ಇದ್ದವು. ಜೌರಂಗಜೆóೀಬನು ಬನಾರಸ್ ಎಂಬ ಹೆಸರನ್ನು ಬದಲಾಯಿಸಿ ಮಹಮ್ಮದಾಬಾದ್ ಎಂಬ ನಾಮಕರಣವನ್ನೂ ಮಾಡಿದ್ದ! ಆದರೆ ಆ ಹೆಸರು ಅಂಟಿಕೊಳ್ಳದೆ ಎಂದೋ ಜಾರಿ ಹೋಯಿತು. ಈ ಅನೇಕ ಹೆಸರುಗಳಲ್ಲಿ ಕಾಶಿ, ವಾರಾಣಸಿ ಮತ್ತು ಬನಾರಸ್ ಎಂಬ ಮೂರು ಹೆಸರುಗಳು ಸಾಮಾನ್ಯ ಬಳಕೆಯಲ್ಲಿ ರೂಢಿಯಾಗಿ ನಿಂತವು.

 'ಕಾಶ್' ಅಥವಾ 'ಕಾಶ್ತೆ' ಅಂದರೆ ಪ್ರಕಾಶಮಾನವಾದದ್ದು, ಹೊಳೆಯುವುದು ಎಂದರ್ಥ. ಈ ಅರ್ಥದಿಂದಲೇ ಕಾಶಿ ಎಂಬ ಹೆಸರು ಬಂದಿತು. ಮನುವಿನಿಂದ ಹನ್ನೆರಡನೆಯ ಪೀಳಿಗೆಯ ರಾಜನಾಗಿದ್ದ 'ಕಾಶ್' ಎಂಬುವನಿಂದ ಕಾಶಿ ಹೆಸರು ಬಂದಿತೆಂದು ಹರಿವಂಶದಿಂದ ತಿಳಿದು ಬರುತ್ತದೆ. ಸ್ವಯಂಭೂ ಪುರಾಣವು ಕಾಶ್ಯಪ ಋಷಿಯಿಂದ ಕಾಶಿಯ ಹೆಸರು ಬಂದಿತೆಂದು ತಿಳಿಸುತ್ತದೆ. ಕಾಶ್/ಕಾಸ್ ಎಂಬ ಹೆಸರಿನ ಹುಲ್ಲು ಗಂಗಾತೀರದ ಈ ಪ್ರದೇಶದಲ್ಲಿ ಹೇರಳವಾಗಿ ಬೆಳೆಯುತ್ತಿದ್ದುದರಿಂದ ಈ ಜಾಗಕ್ಕೆ ಕಾಶಿ ಎಂಬ ಹೆಸರು ಬಂದಿರಬಹುದೆಂಬ ಊಹೆಯೂ ಇದೆ. ಆದರೆ ಕಾಶಿಯ ಪವಿತ್ರತೆಗೆ ಮುಖ್ಯಕಾರಣ, ಅದು ಪ್ರಕಾಶಮಾನವಾದದ್ದು, ಪ್ರಕಾಶಗೊಳಿಸುವಂತದ್ದು ಎಂಬ ಅರ್ಥದಿಂದಲೇ ಸರಿ. ಕಾಶಿಯೇ ವಿಶ್ವದ ಕೇಂದ್ರಬಿಂದು, ಇಲ್ಲಿಂದಲೇ ವಿಶ್ವದುತ್ವತ್ತಿ ಶುರುವಾಯಿತು ಎಂದು ಪುರಾಣಗಳು ಸಾರಿ ಹೇಳುತ್ತವೆ. 'ಸೃಷ್ಟಿಯ ಆದಿಯಲ್ಲಿ ಇಡಿ ಜಗತ್ತು ಲಿಂಗಮಯವಾಗಿತ್ತು, ಎಲ್ಲವೂ ಲಿಂಗದಲ್ಲೇ ಪ್ರತಿಷ್ಠಿತವಾಗಿತ್ತು' ಎನ್ನುತ್ತದೆ ರುದ್ರಸಂಹಿತೆ. ಸೃಷ್ಟಿಗೆ ಮೊದಲು ಎಲ್ಲವನ್ನೂ ತನ್ನಲ್ಲೆ ಅಡಗಿಸಿಕೊಂಡು ಅಂಡಾಕಾರವಾಗಿದ್ದ ಹಿರಣ್ಯಗರ್ಭ ಒಡೆದು ಇಬ್ಭಾಗವಾಯಿತು. ಆಗ ಒಂದೇ ಸಲ ಕೋಟ್ಯಾಂತರ ಸೂರ್ಯರು ಉದಯಿಸಿದಂತೆ ಉಜ್ವಲ ಪ್ರಭೆ ಬೆಳಗಿತು. ಶಿವ (ಪರಮೇಶ್ವರ) ತಾನೇ ತನ್ನ ಪ್ರಕಾಶದಿಂದ (ಈಶ ಅಥವಾ ಈಶಾನ ಎನಿಸಿ) ಇಡೀ ವಿಶ್ವವನ್ನೆಲ್ಲಾ ಪಸರಿಸಿದ. ಹಾಗೂ ಅತ್ಯಂತ ಪ್ರಕಾಶಮಾನವಾದ ಸ್ತಂಭವಾಗಿ, ದಿವ್ಯ ಲಿಂಗಾಕಾರವಾಗಿ (ಮೂಲ ಸ್ತಂಭವಾಗಿ, ದಿವ್ಯ ಆಕಾಶಲಿಂಗವಾಗಿ) ಪ್ರಕಟವಾದ. ಈ ದಿವ್ಯಲಿಂಗ ಮೊಟ್ಟಮೊದಲು ಕಾಣಿಸಿದ್ದು ವಿಶ್ವದ ಕೇಂದ್ರಬಿಂದುವಾದ ಕಾಶಿಯಲ್ಲಿ. ಅದಕ್ಕಾಗಿ ಆ ಸ್ಥಳವೇ 'ಪ್ರಕಾಶಮಾನವಾದ ಸ್ಥಳ' ಅಥವಾ 'ಕಾಶಿ' ಎಂಬ ಹೆಸರು ಪಡೆಯಿತು. ಅಂದರೆ ಕಾಶಿ ಎಂಬುದು ದಿವ್ಯ ಪ್ರಕಾಶದ ಸ್ಥಳ; ಎಲ್ಲಿ ದಿವ್ಯಪ್ರಕಾಶವು ಅಜ್ಞಾನದ ಕತ್ತಲನ್ನು ಹರಿಸಿ, ಜ್ಞಾನವನ್ನು ಬೆಳಗಿಸಿ, ಮೋಕ್ಷದ ಮಾರ್ಗವನ್ನು ತೋರುತ್ತದೆಯೋ ಅದೇ 'ಕಾಶಿ'.

 ಮಹಾಭಾರತದಿಂದ ಕಾಶಿ ಎಂಬದು ರಾಜ್ಯದ ಹೆಸರೆಂದೂ, ವಾರಾಣಸಿ ಎನ್ನುವುದು ರಾಜ ದಿವೋದಾಸನು ನಿರ್ಮಿಸಿದ ರಾಜಧಾನಿ/ ನಗರಿಯ ಹೆಸರೆಂದೂ ತಿಳಿದುಬರುತ್ತದೆ. ಬೌದ್ಧಗ್ರಂಥಗಳು ಸುಮಾರು ಕ್ರಿ.ಶ. ಮೊದಲ ಶತಮಾನದಿಂದ ಕಾಶಿ ಮತ್ತು ವಾರಾಣಸಿ ಎಂಬ ಹೆಸರುಗಳನ್ನೂ ನಗರ ಎಂಬ ಅರ್ಥದಲ್ಲೇ ಉಪಯೋಗಿಸಿದವು. ಚೀನಾದ ಯಾತ್ರಿಕ ಫಾಹಿಯಾನ್ (ಕ್ರಿ.ಶ 399-413) ಕಾಶಿ ರಾಜ್ಯದ ವಾರಾಣಸಿ ನಗರಕ್ಕೆ ಬಂದಿದ್ದನೆಂದು ಹೇಳಿ ಎರಡು ಹೆಸರುಗಳಲ್ಲಿನ ವ್ಯತ್ಯಾಸವನ್ನು ತೋರಿಸುತ್ತಾನೆ. ಆದರೆ ಬಳಕೆಯಲ್ಲಿ ಎರಡೂ ಹೆಸರುಗಳಿಗೆ ಒಂದೇ ಅರ್ಥ ಬಂದುದು ಕ್ರಿ. ಶ ಏಳನೆಯ ಶತಮಾನದಿಂದ. ಬನಾರಸ್ ಎಂಬ ಹೆಸರು ಕ್ರಿ.ಶ ಹನ್ನೊಂದನೆಯ ಶತಮಾನದ 'ಯವನಾರಿ' (ಯವನರ ಶತ್ರು) ಎಂಬ ಬಿರುದು ಪಡೆದಿದ್ದ ರಾಜನಿಂದ ಬಂತೆಂಬ ಹೇಳಿಕೆಯಿದೆ. ಚಂದ್ರವಂಶೀಯನಾದ ಈ ರಾಜನ ಹೆಸರು ಯವನಾರಿಯಿಂದ ಯವನಾರ್ ಆಗಿ, ಕೊನೆಗೆ ಬನ್ನಾರ್ ಅಂತಾಯ್ತೆಂದೂ, ಅದರಿಂದ ಆತನ ರಾಜಧಾನಿಗೆ 'ಬನಾರಸ್' ಎಂಬ ಹೆಸರು ಬಂತೆಂದೂ ವಿವರಣೆಯಿದೆ. ಬೌದ್ಧ ಜಾತಕಗಳು ವಾರಾಣಸಿಯನ್ನು ಬಾರಾಣಸಿ ಎಂದು ಕರೆದಿವೆ. ಪ್ರಾಯಶಃ ಬಾರಾಣಸಿ ಕ್ರಮೇಣ ಬನಾರಸ್ ಆಗಿರಬಹುದು. ಒಟ್ಟಿನಲ್ಲಿ 'ಕಾಶಿ' ಅತ್ಯಂತ ಪುರಾತನಕಾಲದಿಂದ ಇಂದಿಗೂ ಪ್ರಚಲಿತವಾಗಿರುವ ಪ್ರಸಿದ್ಧ ಹೆಸರು, ವಾರಾಣಸಿಯೂ ಅಷ್ಟೇ, ಬನಾರಸ್ ಮಧ್ಯ ಶತಮಾನಗಳಿಂದ ಬಳಕೆಗೆ ಬಂದ ಹೆಸರು. ಇತ್ತೀಚೆಗೆ 'ವಾರಾಣಸಿ' ಎಂಬುದೇ ಅಧಿಕೃತವಾದ ಹೆಸರಾಗಿದೆ.

 ಕಾಶಿ ಸೃಷ್ಟಿಯ ಕೇಂದ್ರಬಿಂದು ಎಂಬುದು ಪರಂಪರಾಗತ ಮೂಲಗಳ ನಂಬಿಕೆ. ಶಿವ-ಪಾರ್ವತಿಯರು ಆನಂದವನಕ್ಕೆ ಬಂದು ನೆಲೆಸಿದರೆಂದ ಮೇಲೆ ಇದರ ಪುರಾತತ್ವವನ್ನು ಎಣಿಸುವುದೂ ಅಸಾಧ್ಯ. ಆದರೂ ಅನೇಕ ಮೂಲಗಳಿಂದ ಕಾಶಿಯ ಕಾಲಮಾನವನ್ನು ನಿರ್ಧರಿಸುವ ಪ್ರಯತ್ನ ಮಾಡಬಹುದು. ಋಷಭ ಮಹಾರಾಜ (ಜೈನರ ಆದಿನಾಥ, ಮೊದಲನೆಯ ತೀರ್ಥಂಕರ) ಮನುವಿನಿಂದ ಐದನೆಯ (ಹದಿನಾಲ್ಕನೆಯ?......) ಪೀಳಿಗೆಯವನು. ಇವನ ಮಗ ಭರತನ ಸೇನಾಪತಿ ಜಯಕುಮಾರ. ಜಯಕುಮಾರನು ಕಾಶಿರಾಜನ ಮಗಳಾದ ಸುಲೋಚನೆಯನ್ನು ಸ್ವಯಂವರ ಪದ್ಧತಿಯಲ್ಲಿ ವಿವಾಹವಾದನೆಂದು ಸಾಹಿತ್ಯಗಳು ಹೇಳುತ್ತವೆ. ಕಾಶಿಯ ರಾಜರುಗಳೆಂದು ಪ್ರಸಿದ್ಧರಾದ ಕಾಶ್, ದಿವೋದಾಸ 1 ಮತ್ತು ದಿವೋದಾಸ 2 ಇವರುಗಳು ಮನುವಿನಿಂದ 12, 25 ಮತ್ತು 40ನೆಯ ಪೀಳಿಗೆಯವರೆಂದು ಪುರಾಣಗಳು ತಿಳಿಸುತ್ತವೆ. ವೇದಕಾಲೀನ ಕೌಶೀತಿಕಿ, ಬೃಹದಾರಣ್ಯಕ, ಸಾಂಖ್ಯಾಯನ ಮತ್ತು ಬೋಧಾಯನ ಸೂತ್ರ ಹಾಗೂ ಗೋಪಥ ಬ್ರಾಹ್ಮಣಗಳಲ್ಲೂ ಕಾಶಿಯ ಉಲ್ಲೇಖವಿದೆ. ಅಥರ್ವಣವೇದದ ಪಿಪ್ಪಲಾದ ಶಾಖೆಯಲ್ಲಿ ಒಬ್ಬ ತಾಂತ್ರಿಕನು ವಿಷಮ ಜ್ವರಕ್ಕೆ ಆದೇಶಕೊಡುತ್ತಾ “ದೂರದ ಗಾಂಧಾರ, ಕಾಶಿ ಮತ್ತು ಮಗಧಕ್ಕೆ ಹೋಗಿ ಸೇರು” ಎನ್ನುತ್ತಾನೆ. ಐತರೇಯ ಬ್ರಾಹ್ಮಣದಲ್ಲಿ ಕಾಶಿಯ ರಾಜ ರೇಣುವನ್ನು ವಿಶ್ವಾಮಿತ್ರನ ಮಗನೆಂದು ಗುರುತಿಸಿದೆ. ರಾಮನ ಯುವರಾಜ ಪಟ್ಟಾಭಿಷೇಕಕ್ಕೆ ಕಾಶಿ ರಾಜನಿಗೂ ಆಮಂತ್ರಣ ಕಳಿಸಬೇಕೆಂದು ವಸಿಷ್ಠರು ಮಂತ್ರಿ ಸುಮಂತ್ರನಿಗೆ ತಿಳಿಸುತ್ತಾರೆ. ಮಹಾಭಾರತದಲ್ಲಿ ಭೀಷ್ಮನು ಕಾಶಿರಾಜನ ಮಕ್ಕಳಾದ ಅಂಬಾ, ಅಂಬಾಲಿಕಾ, ಅಂಬಿಕೆಯರನ್ನು ಅಪಹರಣ ಮಾಡಿಕೊಂಡು ಬಂದ ಕಥೆಯಿದೆ. ಮಹಾಭಾರತದ ಯುದ್ಧದಲ್ಲೂ ಕಾಶಿಯ ರಾಜನ ಪಾತ್ರವಿತ್ತು. ಈ ಸಾಹಿತ್ಯಾಧಾರಗಳ ನೆರವಿನಿಂದ (ಮತ್ತು ರಾಮಾಯಣದ ಕಾಲವನ್ನು ಸಾಂಪ್ರದಾಯಿಕಕ್ಕಿಂತಲೂ ಬಲು ಹಿಡಿತದಿಂದ, ಪಾಶ್ಚಿಮಾತ್ಯರ ಎಣಿಕೆಯಂತೆ ಕ್ರಿ.ಪೂ. 1950 ಎಂದಿಟ್ಟುಕೊಂಡು) ಕಾಶಿಯ ಕಾಲವನ್ನು ಸುಮಾರು ಕ್ರಿ.ಪೂ 3300/3500 ಎಂದು ಗುರುತಿಸಬಹುದು. ಹಾಗಲ್ಲದೆ ಅನೇಕ ಭಾರತೀಯ ವಿದ್ವಾಂಸರ ಹೇಳಿಕೆಯ ಮೇಲೆ ರಾಮಾಯಣದ ಕಾಲವನ್ನು ಇನ್ನೂ ಕೆಲ ಸಾವಿರ ವರ್ಷಗಳಷ್ಟು ಹಿಂದೆ ತಳ್ಳಿದರೆ ಕಾಶಿಯೂ ಸಹ ಇನ್ನೂ ಹಳೆಯದೆನಿಸುವುದು. ಒಟ್ಟಿನಲ್ಲಿ, ಇಂದು ಪ್ರಪಂಚದಲ್ಲಿ ಇನ್ನೂ ಜೀವಂತವಾಗಿ ನಳನಳಿಸುತ್ತಿರುವ ಆರು ಹಳೆಯ ನಗರಗಳಲ್ಲಿ ಕಾಶಿಯೇ ಅತ್ಯಂತ ಪುರಾತನವಾದುದು. ಈ ಆರು ನಗರಗಳ ಕಾಲಮಾನ ಸುಮಾರು ಇಂತಿದೆ (ಪಾಶ್ಚಿಮಾತ್ಯರ ಎಣಿಕೆಯಂತೆ) -ಪೀಕಿಂಗ್ (ಕ್ರಿ.ಪೂ.2000), ಡಮಾಸ್ಕಸ್ (ಕ್ರಿ.ಪೂ. 2000), ಜೆರೂಸಲೆಮ್ (ಕ್ರಿ.ಪೂ. 1500), ಅಥೆನ್ಸ್ (ಕ್ರಿ.ಪೂ. 1400), ರೋಮ್ (ಕ್ರಿ.ಪೂ 754) ಮತ್ತು ಕಾಶಿ (ಕ್ರಿ.ಪೂ 3500).

 ಭದ್ರಭಾವನೆಗಳು ಹಾಗೂ ಗಾಢವಾದ ನಂಬಿಕೆಗಳು ಕಾಶಿಯನ್ನೂ ಹಿಂದೂಗಳ ಪವಿತ್ರಕ್ಷೇತ್ರವನ್ನಾಗಿ ಮಾಡಿವೆ. ಸಾಂಪ್ರದಾಯಿಕವಾಗಿ ಕಾಶಿಯ ವರ್ಣನೆ ಹೆಚ್ಚಾಗಿ ತ್ರಿವರ್ಗಗಳಲ್ಲಿ ಮೂಡಿ ಬಂದಿದೆ. ತ್ರಿವರ್ಗದ ವರ್ಣನೆಗಳಲ್ಲಿ ಕೆಲವನ್ನು ಮಾತ್ರ ಇಲ್ಲಿ ಕೊಡಲಾಗಿದೆ- ಕಾಶಿ ಶಿವನ ತ್ರಿಶೂಲದ ಮೇಲಿದೆ - ಅದು ಜ್ಯೋತಿಯ ನೆಲೆ- ಅದಕ್ಕೆ ನಾಶವಿಲ್ಲ; ಸೃಷ್ಟಿಯಲ್ಲಿ ಕಾಶಿ ಕೇಂದ್ರಬಿಂದು -ಸ್ಥಿತಿಯಲ್ಲಿ ಮುಕ್ತಿಕ್ಷೇತ್ರ-ಲಯದಲ್ಲಿ ತ್ರಿಶೂಲದ ಮೇಲೆ; ಇಡಾ(ಇಚ್ಛಾ), ಸುಷುಮ್ನಾ (ಜ್ಞಾನ) ಮತ್ತು ಪಿಂಗಳಾ (ಕ್ರಿಯಾ) ನಾಡಿ/ಶಕ್ತಿಗಳ ಮೇಲಿರುವ ಸಹಸ್ರಾರ/ಪರತತ್ವವೇ ಕಾಶಿ; ಕರ್ಮ, ಜ್ಞಾನ, ಭಕ್ತಿಗಳ ಸಂಗಮವೇ ಕಾಶಿ; ಕಾಶಿಯ ಸ್ಥಾನ ಶಿವನತ್ರಿಶೂಲದ ಮೇಲೆ - ಉತ್ತರವಾಹಿನಿ ಗಂಗಾ ತೀರದಲ್ಲಿ-ಅನ್ನಪೂರ್ಣೆಯ ಭಂಡಾರದಲ್ಲಿ; ಕಾಶಿ ಇರುವುದು ಶಿವನ ಆನಂದ ಕಾನನವಾಗಿ- ಭಕ್ತರ ಮುಕ್ತಿಕ್ಷೇತ್ರವಗಿ-ಗಂಗಾಮಾತೆಯ (ಜ್ಞಾನ ಪ್ರವಾಹದ) ಮಡಿಲಲ್ಲಿ; ವರಣ-ಗಂಗಾ-ಅಸಿ ನದಿಗಳಿಂದ ಆವೃತವಾಗಿ; ಗುಡಿ-ಘಟ್ಟ-ಮಠಗಳ ಬೀಡಾಗಿ; ಸಾಧು-ಸಿದ್ಧ-ಸಂತರ ಆಶ್ರಮವಾಗಿ; ಸ್ಥಾವರ-ಜಂಗಮ-ಮಾನಸ ತೀರ್ಥಗಳ ನೆಲೆಯಾಗಿ; ರಾಮಾನಂದ (ಭಕ್ತಿ)-ಕಬೀರ್ (ನಿರ್ಗುಣ)- ತುಳಸಿಯರ (ಸಗುಣ) ಕಾರ್ಯಕ್ಷೇತ್ರವಾಗಿ; ಕಾಶಿ ವಿಶ್ವನಾಥ ಜ್ಯೋತಿರ್ಲಿಂಗ-ಪಂಚಕ್ರೋಶಿ ಯಾತ್ರೆ ಪವಿತ್ರ ಯಾತ್ರೆ-ಕಾಶಿ ಮೋಕ್ಷಕ್ಷೇತ್ರ.........ಹೀಗಿವೆ ಕೆಲವು ತ್ರಿವರ್ಗಗಳ ವರ್ಣನೆ.

 ಕಾಶಿ ಹಿಂದೂಗಳ ಪವಿತ್ರ ಕ್ಷೇತ್ರವೆನಿಸಲು ಅನೇಕ ಕಾರಣಗಳಿವೆ. ಎಲ್ಲಕ್ಕಿಂತ ಮೊದಲನೆಯದಾಗಿ ಕಾಶಿ ಶಿವನ ಕ್ಷೇತ್ರ. ಶಿವ ಪಾರ್ವತಿಯರ ವಿವಾಹದ ನಂತರ ಶಿವನಿಗೆ ಕೈಲಾಸದಲ್ಲಿರುವ ಮನಸ್ಸಾಗಲಿಲ್ಲ. ತನ್ನ ನಿವಾಸಕ್ಕೆ ಸೂಕ್ತವಾದ, ಪ್ರಶಾಂತ ಸ್ಥಳವನ್ನು ಹುಡುಕಲು ತನ್ನ ಗಣಗಳನ್ನು ಕಳಿಸಿದ. ಅವನ ಗಣಗಳು ಈ ಪ್ರಶಾಂತ ಸ್ಥಳವನ್ನು ಹುಡುಕಿ, ಅದಕ್ಕೆ 'ಆನಂದ ಕಾನನ' ಎಂಬ ಹೆಸರನ್ನು ಕೊಟ್ಟರು. ಶಿವ ತಪೋಮೂರ್ತಿ-ಜ್ಞಾನಮೂರ್ತಿ, ಅವನು ಆನಂದ ಸಮುದ್ರದಲ್ಲಿ- ಆನಂದ ಕಾನನದಲ್ಲಿ ಇರದೆ ಬೇರೆ ಇನ್ನೆಲ್ಲಿದ್ದಾನು? ಮುಂದೆ, ರಾಜ ದಿವೋದಾಸ ಆಳುವಾಗ, ಎಲ್ಲಾ ದೇವತೆಗಳೂ ಕಾಶಿಯನ್ನು ಬಿಡಬೇಕಾಯಿತು. ಶಿವ ಮನಸ್ಸಿಲ್ಲದ ಮನಸ್ಸಿನಿಂದ ಮಂದರ ಪರ್ವತಕ್ಕೆ ಹೋಗುವ ಮೊದಲು 'ನಾನೆಂದೂ ಕಾಶಿಯನ್ನೂ ಬಿಡಲಾರೆ' ಎಂದು, ತನ್ನನ್ನು ಲಿಂಗರೂಪದಲ್ಲಿ 'ಅವಿಮುಕ್ತೇಶ್ವರ'ನನ್ನಾಗಿ ಇಲ್ಲಿಯೇ ಸ್ಥಾಪಿಸಿದನೆಂದು ಕಥೆ. ಆದ್ದರಿಂದ ಅವಿಮುಕ್ತೇಶ್ವರನೇ ಮೊದಲ ಲಿಂಗ, ಆದಿಲಿಂಗ ಎಂದೂ, ಕಾಶಿಯ ವಿಶ್ವೇಶ್ವರ ಲಿಂಗಕ್ಕೂ ಗುರುವೆಂದೂ ಪರಿಗಣಿಸುತ್ತಾರೆ. ಹೀಗೆ 'ಆನಂದಕಾನನ' ಅವಿಮುಕ್ತಕ್ಷೇತ್ರವೆಂಬ ಹೆಸರನ್ನೂ ಪಡೆಯಿತು. ಇಷ್ಟೇ ಅಲ್ಲದೆ, ಜ್ಯೋತಿರ್ಮಯ ರೂಪದಲ್ಲಿ ಕಾಣಿಸಿಕೊಂಡ ಶಿವ ಇಲ್ಲಿಯ ಜ್ಯೋತಿರ್ಲಿಂಗ ವಿಶ್ವೇಶ್ವರನಾಗಿ ಆವಿರ್ಭೂತವಾದ ಸ್ಥಳ ಕಾಶಿ. ಜ್ಯೋತಿರ್ಲಿಂಗದ ಜ್ಯೋತಿಯು ಸಹಸ್ರಾರ ಚಕ್ರದ ಪ್ರಭೆಯಂತೆ ಬ್ರಹ್ಮಜ್ಞಾನದ ಪ್ರಕಾಶವನ್ನೂ ಬಿಂಬಿಸುವ ಕ್ಷೇತ್ರ ಕಾಶಿ.

 ಎರಡನೆಯದಾಗಿ ಕಾಶಿಯಿಂದಲೇ ಸೃಷ್ಟಿ, ಕಾಶಿಯಲ್ಲಿಯೇ ಲಯ ಅಥವಾ ಪ್ರಳಯ. ಸೃಷ್ಟಿಯ ಪ್ರಕ್ರಿಯೆ ಶುರುವಾದದ್ದೇ ಇದೇ ಕೇಂದ್ರಬಿಂದುವಿನಿಂದ. ಆದ್ದರಿಂದ ಎಲ್ಲಾ ತೀರ್ಥಗಳೂ, ಕ್ಷೇತ್ರಗಳೂ ಇಲ್ಲಿಂದಲೇ ಹೊರಹೊಮ್ಮುತ್ತವೆ. ಬ್ರಹ್ಮಾಂಡವನ್ನೇ ಪ್ರತಿನಿಧಿಸುವ ಪಂಚಕ್ರೋಶಿ ಕ್ಷೇತ್ರವೂ (ಮಂಡಲವೂ) ಆ ಪುಣ್ಯಕ್ಷೇತ್ರಗಳಲ್ಲೊಂದು. ಲಯವಾಗುವಾಗ ಸೃಷ್ಟಿಯ ಎಲ್ಲ ತತ್ವಗಳೂ ಒಂದಾಗಿ, ಪರತತ್ವವಾಗಿ ಮತ್ತೆ ಅದೇ ಕೇಂದ್ರಬಿಂದುವಿನಲ್ಲಿ ಬಂದು ಸೇರುತ್ತವೆ. ಆಗ ಕಾಶಿ ಪ್ರಕಾಶಮಾನವಾದ ಒಂದು ಬಿಂದುವಿನಾಕಾರ ತಾಳಿ ಶಿವನ ತ್ರಿಶೂಲದ ಮೇಲೆ ಬಂದು ನಿಲ್ಲುತ್ತದೆ. ಹೀಗಾಗಿ ಶಿವ, ಪ್ರಕಾಶಮಾನದ ಜ್ಯೋತಿ, ಕಾಶಿ ಇವು ಮೂರೂ ಒಂದೇ ಪರತತ್ವದ ಮೂರು ಪ್ರಾಕಾರಗಳು, ಹಂತಗಳು. ಲಯವಾದಾಗ ಎಲ್ಲ ತತ್ವಗಳೂ ಒಂದಾಗಿ, ಹತ್ತಿಯ ಗಂಟಿನಂತೆ ಕ್ಷಣದಲ್ಲಿ ಉರಿದು ಹೋಗುವುದರಿಂದ ಕಾಶಿಯನ್ನು 'ಮಹಾಸ್ಮಶಾನ' ಎಂದೂ ಕರೆಯುತ್ತಾರೆ.

 ಮೂರನೆಯದಾಗಿ ಕಾಶಿ ಮುಕ್ತಿಯನ್ನೂ ದೊರಕಿಸಿಕೊಡುವ ಪುಣ್ಯಕ್ಷೇತ್ರ. ಮಿಕ್ಕೆಲ್ಲಾ ಪುಣ್ಯಕ್ಷೇತ್ರಗಳಲ್ಲಿ ಧರ್ಮ-ಅರ್ಥ-ಕಾಮಗಳು ಸಿಗಬಹುದು, ಅಲ್ಲಿ ಗಳಿಸಿದ ಪುಣ್ಯದಿಂದ ಸ್ವರ್ಗವೇ ಸಿಗಬಹುದು. ಗಳಿಸಿದ ಪುಣ್ಯ ತೀರಿದ ಮೇಲೆ, ಸ್ವರ್ಗದಿಂದಿಳಿದು, ಪುನರ್ಜನ್ಮ ತಾಳಿ ಬರಲೇಬೇಕು. ಆದರೆ ಜನ್ಮ-ಮರಣಗಳ ಸಂಕೋಲೆಯಿಂದ ಮುಕ್ತಿ (ಮೋಕ್ಷ) ಸಿಗಬೇಕಾದರೆ ಕಾಶಿಯಲ್ಲೇ ಸಾಯಬೇಕು. ಇದೇನು? ಕಾಶಿಯಲ್ಲಿ ಸತ್ತ ಮಾತ್ರವೇ ಪುಣ್ಯವೇ? ಹಿಂದಿನ ಕರ್ಮಗಳು ಕ್ಷಯಿಸಬೇಡವೇ? ಪಾಪಗಳು ನಿರ್ನಾಮವಾಗಬೇಡವೇ? ಕಾಶಿಯಲ್ಲಿ ಸತ್ತರೇ ಮುಕ್ತಿ (ಕಾಶ್ಯಾಮ್ ಮರಣಾನ್ ಮುಕ್ತಿ:) ಅನ್ನುವುದು ಜ್ಞಾನವಿಲ್ಲದೆ ಮುಕ್ತಿಯಿಲ್ಲ (ಋತೇ ಜ್ಞಾನಾನ್‍ನ ಮುಕ್ತಿ:) ಅನ್ನುವುದಕ್ಕೆ ವಿರೋಧವಲ್ಲವೇ? ಎಂಬ ಹಲವಾರು ಪ್ರಶ್ನೆಗಳು ಏಳುವುವು. ಇವಕ್ಕೆ ಉತ್ತರವಾಗಿ ಅನೇಕ ಬಣ್ಣ ಬಣ್ಣವಾದ ರೂಪಕಗಳು, ಪುರಾಣದ ಕಥೆಗಳು, ಆಧ್ಯಾತ್ಮಿಕ ವಿವರಣೆಗಳು ಬಂದಿವೆ. ಸ್ಥೂಲವಾಗಿ ಕೆಲವನ್ನು ನೋಡಬಹುದು. ಅವಿಮುಕ್ತಕ್ಷೇತ್ರ ಅನ್ನುವುದಕ್ಕೆ ಶಿವ ಎಂದೂ ತ್ಯಜಿಸದ ಕ್ಷೇತ್ರ ಅನ್ನುವಂತೆ, 'ಅವಿ' (ಪಾಪ) ಯಿಂದ 'ಮುಕ್ತ'ವಾದ ಕ್ಷೇತ್ರ ಎಂಬ ವಿವರಣೆಯೂ ಇದೆ. ಜಾಬಾಲೋಪನಿಷತ್ತಿನ ಪ್ರಕಾರ ವರಣ ನದಿಯು ಇಂದ್ರಿಯ ಕೃತಪಾಪಗಳನ್ನೂ ಮತ್ತು ಅಸಿ (ನಾಸಿ) ನದಿಯು ಪೂರ್ವಾರ್ಜಿತ ಪಾಪಗಳನ್ನೂ ನಾಶಮಾಡುತ್ತವೆ. ವರಣಾ (ಹುಬ್ಬು) ಮತ್ತು ನಾಸೀ (ಮೂಗು) ಇವುಗಳ ಮಧ್ಯೆ ಇರುವುದು ವಿಶುದ್ಧ ಚಕ್ರ. ಅದು ಜ್ಞಾನದ ನೆಲೆ. ಅಲ್ಲಿ ಮನಸ್ಸನ್ನು ನೆಲೆಗೊಳಿಸಿದ ಯೋಗಿಗೆ ಪಾಪದ ಸೋಕಾದರೂ ಎಲ್ಲಿ? ಅಲ್ಲದೆ ಜ್ಞಾನಪ್ರವಾಹದ ಸುರನದಿ ಗಂಗೆಯಲ್ಲಿ ಸ್ನಾನ ಮಾಡುವುದರಿಂದ ಪಾಪಗಳೆಲ್ಲವೂ ತೊಳೆಯಲ್ಪಡುತ್ತವೆ. ಹೀಗಾಗಿ ಅವಿಮುಕ್ತ ಕ್ಷೇತ್ರದಲ್ಲಿರುವವರು 'ಅವಿ' (ಪಾಪ) ಯಿಂದ ಯಾವಾಗಲೂ 'ಮುಕ್ತ'ರೇ ಸರಿ. ಅವರಿಗೆ (ಜ್ಞಾನ ಪ್ರವಾಹದಲ್ಲಿ ಮಿಂದವರಿಗೆ) ಕರ್ಮಗಳ ಫಲವಿಲ್ಲ. ಅಲ್ಲದೆ ಕಾಶಿಯು ಕರ್ಮಗಳನ್ನೂ ಕತ್ತರಿಸಿಹಾಕುತ್ತದೆ (ಕರ್ಮಾಣಾಂ ಕರ್ಶನಾಶ್ಚೈವ..........) ಎನ್ನುತ್ತದೆ ಶಿವಪುರಾಣ. ಕಾಶಿಯಲ್ಲಿಯ ಜೀವಿಗಳ ಕರ್ಮದ ಬೀಜಗಳನ್ನು ತಾನೇ ಸುಟ್ಟು ಹಾಕುತ್ತೇನೆಂದು ಶಿವ (ಸ್ಕಂಧಪುರಾಣದಲ್ಲಿ) ಹೇಳಿದ್ದಾನೆ. ಕಾಶಿಯಲ್ಲಿ, ಜ್ಞಾನದ ಪ್ರಭೆಯಲ್ಲಿ, ಬಿದ್ದ ಕರ್ಮದ ಬೀಜಗಳೆಲ್ಲವೂ ಅಲ್ಲೇ ಹುರಿದು ಹೋಗಬೇಕಲ್ಲವೇ? ಬ್ರಹ್ಮನ ಐದನೆಯ ತಲೆಯನ್ನು ಕಾಲಭೈರವನು ತನ್ನ ಉಗುರಿನಿಂದ ಚಿವುಟಿ ಹಾಕಿದಾಗ ಅವನಿಗೆ ಬ್ರಹ್ಮಹತ್ಯ ದೋಷವು ಅಂಟಿಕೊಂಡಿತು. ಹನ್ನೆರಡು ವರ್ಷ ದೇಶ ದೇಶ ಅಲೆದು ಬಿಕ್ಷಾಟನೆ ಮಾಡಿದರೂ ಹೋಗದ ದೋಷ, ಕಾಶಿಗೆ ಕಾಲಿಟ್ಟಾಗಲೇ ಕಳಚಿ ಬೀಳಲಿಲ್ಲವೆ? ಇನ್ನು ಹುಲು ಮಾನವನ ಪಾಪ ನಿರ್ಮೂಲನದ ಬಗ್ಗೆ ಏಕೆ ಶಂಕೆ? ಶಿವ 'ಮಹಾಕಾಲ' ಅಥವಾ ಕಾಲಾತೀತನೇನೋ ಸರಿ. ಅವನ ಕಾಶಿ ಸೃಷ್ಟಿಯ ಕೇಂದ್ರಬಿಂದುವಾದ್ದರಿಂದ ಅದೇ ಸಂಸಾರ ಚಕ್ರದ ಕೇಂದ್ರಬಿಂದು. ಈ ಕೇಂದ್ರಬಿಂದುವಿನಲ್ಲಿ ಕಾಲಚಕ್ರದ ಪರಿಧಿಯ ವೇಗವೂ ಇಲ್ಲ, ಪರಿಣಾಮವೂ ಇಲ್ಲ, ಕರ್ಮಫಲವೂ ಇಲ್ಲ. ಆಧ್ಯಾತ್ಮಿಕವಾಗಿ ನೋಡಿದರೆ, ಮೊದಲೇ ಹೇಳಿದಂತೆ, ಜ್ಞಾನದ ಪ್ರಭೆಯಲ್ಲಿ ಎಲ್ಲ ಕರ್ಮದ ಬೀಜಗಳು ಹತ್ತಿಯ ಮೂಟೆಯಂತೆ ಕ್ಷಣದಲ್ಲಿ ಸುಟ್ಟು ಬೂದಿ! ಕೊನೆಗೆ, ಕಾಶಿಯಲ್ಲಿ ಸಾಯುವವರ ಕಿವಿಯಲ್ಲಿ ಶಿವನೇ 'ತಾರಕ ಮಂತ್ರ' ವನ್ನೂ ಉಸಿರಿ ಅವರಿಗೆ ಮುಕ್ತಿಯನ್ನು ದೊರಕಿಸಿ ಕೊಡುತ್ತಾನೆ!

 ನಾಲ್ಕನೆಯದಾಗಿ, ಕಾಶಿಯು ಪವಿತ್ರ ಕ್ಷೇತ್ರವಾಗಲು ಇಲ್ಲಿಯ ಅನೇಕ ತೀರ್ಥಗಳೂ ಮುಖ್ಯಕಾರಣ, ಸ್ಥಾವರ (ಗುಡಿ, ಲಿಂಗ, ವಿಗ್ರಹ), ಜಲ (ನದೀಘಟ್ಟ, ಕೊಳ, ಬಾವಿ) ಮತ್ತು ಜಂಗಮ (ಸಾಧು-ಸಂತರು) ತೀರ್ಥಗಳು ಕಾಶಿಯನ್ನು ತುಂಬಿವೆ. ಕಾಶಿಯ ಕಣಕಣದಲ್ಲೂ ಶಂಕರ. ಇಲ್ಲಿ ಎಲ್ಲಾ ದೇವತೆಗಳೂ, ನವಗ್ರಹಗಳೂ, ನವದುರ್ಗಿಯರು, ಹನ್ನೆರಡು ಆದಿತ್ಯರು, ಐವತ್ತಾರು ವಿನಾಯಕರು, ಅರವತ್ತನಾಲ್ಕು ಯೋಗಿನಿಯರೂ...............ಎಲ್ಲರೂ ಇಲ್ಲಿ ನೆಲೆಸಿದ್ದಾರೆ. ಈ ತೀರ್ಥಗಳ ಸನ್ನಿಧಿಯಲ್ಲಿ ದೈವತ್ವದೆಡೆ ಹೆಜ್ಜೆಯಿಡಲು ಅನೇಕಾನೇಕ ಅವಕಾಶಗಳು-ಎಲ್ಲಾ ಕಲ್ಮಶಗಳನ್ನೂ, ಪಾಪಗಳನ್ನೂ ಗಂಗಾ-ಪಂಚಗಂಗಾಗಳಲ್ಲಿ ತೊಳೆದು ನಿರ್ಮಲವಾಗುವ ಭಾಗ್ಯ; ಅಂತಃಕರಣವನ್ನು ಶುದ್ಧಿಯಾಗಿಸಿಕೊಳ್ಳುವ ಸದವಕಾಶ; ಧ್ಯಾನ-ಜಪ-ತಪಗಳಲ್ಲಿ ನಿರತರಾಗಿ ಒಂದಕ್ಕೆ ನೂರರಷ್ಟು ಫಲ ಅನುಭವಿಸುವ ಪುಣ್ಯ; ಸಾಧು-ಸಂತರ ಸತ್ಸಂಗದಲ್ಲಿ ನಿಸ್ಸಂಗತ್ವದ ಮೊದಲ ಪಾಠ ಕಲಿಯುವ ಅವಕಾಶ............. ಕೊನೆಗೆ ಸಾಯುವ ಮುನ್ನ ಶಿವನ 'ತಾರಕ ಮಂತ್ರ'ದ ಉಪದೇಶದಿಂದ ಮೋಕ್ಷ! ಒಟ್ಟಿನಲ್ಲಿ “ಅಸತ್ಯವೆನಿಸಿದ ಈ ಜಗತ್ತಿನಲ್ಲಿ ನಾಲ್ಕು ಸತ್ಯಗಳಿವೆ-ಕಾಶಿವಾಸ, ಸಾಧು-ಸನ್ಯಾಸಿಗಳ ಸಹವಾಸ, ಗಂಗಾಸ್ನಾನ ಮತ್ತು ಶಿವನ ಪೂಜೆ”. ಎಲ್ಲಿಂದಲೋ ತೋರಿಬಂದ ಪರಿಮಳ, ಎಲ್ಲೋ ಅನುಭವಿಸಿದ ಸ್ಪಂದನ, ಎಲ್ಲಿಂದಲೋ ಹಾರಿಬಂದ ಕಿಡಿ............. ಇಷ್ಟೇ ಸಾಲದೆ ಸತ್ಯದರ್ಶನಕ್ಕೆ?

 ಕಾಶಿಯ ಪುಣ್ಯಕ್ಷೇತ್ರದಲ್ಲಿ ಸುಮಾರು 2000 ಮಂದಿರಗಳಿವೆ (1965ರ ವಾರಾಣಸಿ ಗೆಜೆಟಿಯರ್ ಪ್ರಕಾರ). ಕಾಶಿಯನ್ನು ಮೂರು ಖಂಡಗಳಾಗಿ ವಿಭಜಿಸಿ, ಅವನ್ನು ಓಂಕಾರೇಶ್ವರ, ವಿಶ್ವೇಶ್ವರ ಮತ್ತು ಕೇದಾರೇಶ್ವರ ಖಂಡಗಳೆಂದು ಕರೆದಿದ್ದಾರೆ. ಇವುಗಳಲ್ಲಿ ಸುಮಾರು ನೂರಕ್ಕೂ ಹೆಚ್ಚು ಶಿವ ದೇವಾಲಯಗಳೂ, ನವದುರ್ಗ, ನವಗೌರಿ, ನವಶಕ್ತಿ, ನವಮಾತ್ರಿಕಾ, ದಶಮಹಾವಿದ್ಯ 44 ಚಂಡೀಪೀಠ, 64 ಯೋಗಿನಿ, 56 ವಿನಾಯಕ, ದ್ವಾದಶಾದಿತ್ಯ, ಹನ್ನೆರಡು ಮುಖ್ಯ ಹನುಮಾನ್ ಮಂದಿರಗಳು ಸೇರಿವೆ. ಆದರೆ ಅತಿ ಮುಖ್ಯವೆನಿಸಿದ ದೇವಾಲಯಗಳಲ್ಲಿ ವಿಶ್ವೇಶ್ವರ (ವಿಶ್ವನಾಥ), ಅನ್ನಪೂರ್ಣಾ, ವಿಶಾಲಾಕ್ಷಿ (ಶಕ್ತಿಪೀಠ), ದುರ್ಗಾ, ಕಾಲಭೈರವ, ಸಂಕಟ ಮೋಚನ ಹನುಮಾನ್, ಆದಿಕೇಶವ, ಬಿಂದು ಮಾಧವ, ತುಳಸಿ ಮಾನಸಮಂದಿರ ಇವು ಸೇರಿರುತ್ತವೆ. ಇದಲ್ಲದೆ ಜೈನರ ದೇವಾಲಯಗಳೂ, ಹತ್ತಿರದಲ್ಲಿ ಸಾರನಾಥವೂ, ಎರಡು ಗುರುದ್ವಾರಗಳೂ, ಹನ್ನೊಂದು ಇಗರ್ಜಿಗಳೂ, 415 ಮಸೀದಿಗಳೂ ಕಾಶಿಯಲ್ಲಿವೆ. ಕಾಶಿಯ 220 ಜಲತೀರ್ಥಗಳಲ್ಲಿ ಸುಮಾರು 98 ತೀರ್ಥಗಳು ಗಂಗಾನದಿಯ ತಟದಲ್ಲಿವೆ. ಇವುಗಳಲ್ಲಿ ಮಣಿಕರ್ಣಿಕಾ, ಚಕ್ರಪುಷ್ಕರಿಣಿ, 62 ಕುಂಡಗಳು, ಅಷ್ಟಕೂಪ್ ನೌಬಾವಳಿ ಎನ್ನಿಸಿದ ಪ್ರಸಿದ್ಧವಾದ ಎಂಟು ಬಾವಿಗಳು ಮತ್ತು ಒಂಬತ್ತು ಬಾವಡೀಗಳು (ಸೋಪಾನ ಅಥವಾ ಮೆಟ್ಟಲುಗಳಿರುವ ಬಾವಿ/ಕೊಳಗಳು) ಸೇರಿವೆ.

 ಕಾಶಿಯಲ್ಲಿ ಅನೇಕ ಯಾತ್ರೆಗಳನ್ನು ನಡೆಸುವ ಪರಿಪಾಠವಿದೆ. ಇಂದು ಗೊತ್ತಿರುವ ಅರವತ್ತು ಪುಣ್ಯಯಾತ್ರೆಗಳಲ್ಲಿ ನಿತ್ಯಯಾತ್ರೆ, ಅಂತಗೃಹೀ ಯಾತ್ರೆ ಮತ್ತು ಪಂಚಕ್ರೋಶಿ ಯಾತ್ರೆಗಳನ್ನು ಶ್ರದ್ಧಾವಂತ ಯಾತ್ರಿಕರು ಕೈಗೊಳ್ಳುತ್ತಾರೆ.

 ಕಾಶಿ ಒಂದು ಹಿಂದಿನಿಂದಲೂ ಒಂದು ದೊಡ್ಡ ವಿದ್ಯಾಕೇಂದ್ರ. ವಲ್ಲಭಿ, ವಿಕ್ರಮಶಿಲಾ, ನಲಂದಾ, ತಕ್ಷಶಿಲಾಗಳಂತೆ ದೊಡ್ಡ ವಿಶ್ವವಿದ್ಯಾಲಯಗಳು ಹಿಂದಿನ ಕಾಲದಲ್ಲಿ ಕಾಶಿಯಲ್ಲಿ ಇರಲಿಲ್ಲ. ಆದರೆ ಮನೆಮನೆಯೂ ಪಾಠಶಾಲೆಯಂತಿದ್ದು, ಇಡೀ ನಗರವೇ ಒಂದು ವಿಸ್ತøತ ವಿಕೇಂದ್ರೀಕೃತ ವಿಶ್ವವಿದ್ಯಾಲಯದಂತಿತ್ತು. ಪಾಠಶಾಲೆಗಳಲ್ಲದೆ ಮಠಗಳಲ್ಲೂ ಸಂಸ್ಕøತ ವೇದ ವಿದ್ಯೆಗೆ ಸಾಕಷ್ಟು ಪ್ರೋತ್ಸಾಹವಿತ್ತು. ಇಲ್ಲಿ ಬೆಳೆದು ಬಂದ ಘನ ವಿದ್ವಾಂಸರ, ಶಾಸ್ತ್ರಾರ್ಥಿಗಳ, ವೇದ ವ್ಯಾಕರಣ ಪಂಡಿತರ, ಆಯುರ್ವೇದ ವೈದ್ಯರ ಪಟ್ಟಿ ಪುಟಗಟ್ಟಲೆ ಕೊಟ್ಟರೂ ಅಪೂರ್ಣವಾಗೇ ಉಳಿಯುತ್ತದೆ. 1968ರ ಸಮೀಕ್ಷೆಯ ಪ್ರಕಾರ ಕಾಶಿಯಲ್ಲಿ 266 ಮಠಗಳೂ ಸುಮಾರು 2000 ಸನ್ಯಾಸಿಗಳೂ ಇದ್ದರು. ಇತ್ತೀಚಿನ ಸಮೀಕ್ಷೆಯೊಂದರಂತೆ ಇಲ್ಲಿ ಸುಮಾರು 133 ಪಾಠಶಾಲೆಗಳು ಸಂಸ್ಕøತ ವಿದ್ಯೆಯ ಪ್ರಸಾರ ಮಾಡುತ್ತಿವೆ. ಇಪ್ಪತ್ತನೆಯ ಶತಮಾನದಲ್ಲಂತೂ ಆರು ಆಧುನಿಕ ವಿಶ್ವವಿದ್ಯಾಲಯಗಳು ಕಾರ್ಯಗತವಾಗಿವೆ-ಕಾಶಿ ಹಿಂದೂ ವಿಶ್ವವಿದ್ಯಾಲಯ (1916), ಕಾಶಿವಿದ್ಯಾಪೀಠ (1921), ಡಾ| ಸಂಪೂರ್ಣಾನಂದ್ ಸಂಸ್ಕøತ ವಿಶ್ವವಿದ್ಯಾಲಯ (1958), ಪಾಶ್ರ್ವನಾಥ ವಿದ್ಯಾಪೀಠ (1938), ಮದ್ರಸಾ ಸಲ್ಫಿಯಾ (ಅರಾಬಿಕ್ ವಿ.ವಿ) ಮತ್ತು ಸೆಂಟ್ರಲ್ ಟಿಬೆಟನ್ ಇನ್‍ಸ್ಟಿಟ್ಯೂಟ್ (1967).

 ಕಾಶಿಯ ಪವಿತ್ರತೆ ಲಕ್ಷಾಂತರ ಜನರನ್ನು ಕಾಶಿಯಾತ್ರೆಗೆ, ಕಾಶಿವಾಸಕ್ಕೆ ಪ್ರತಿವರ್ಷವೂ ಆಕರ್ಷಿಸುತ್ತಿದೆ. ಇಲ್ಲಿಗೆ ಬಂದವರು ನದೀಘಾಟ್‍ಗಳಲ್ಲಿ, ಗಲ್ಲಿಗಳಲ್ಲಿ, ಮಂದಿರಗಳಲ್ಲಿ, ಯಾತ್ರೆಗಳಲ್ಲಿ, ಮೇಳ, ಹಬ್ಬಗಳಲ್ಲಿ, ಸಾಧು ಸನ್ಯಾಸಿಗಳ ದರ್ಶನದಲ್ಲಿ ಮೇಲೆ ಹೇಳಿದ ಪರಿಮಳ-ಸ್ಪಂದನ-ಕಿಡಿಯನ್ನೂ ಅರಸುತ್ತಾರೆ. ಕಾಶಿಯ ಪ್ರಕಾಶ, ಇಲ್ಲಿಯ ವಿದ್ವತ್ತು, ಪಾಂಡಿತ್ಯ, ಪರಿಸರ ಅನೇಕ ವಿದ್ಯಾರ್ಥಿಗಳನ್ನು, ಪಂಡಿತರನ್ನು, ಸಾಧು-ಸಂತರನ್ನು, ತಪಸ್ವಿ, ಋಷಿಗಳನ್ನು, ತತ್ವಾನ್ವೇಷಕರನ್ನು ಸದಾಕಾಲವೂ ಆಕರ್ಷಿಸುತ್ತಲೇ ಇದೆ. ಅನೇಕ ಆಚಾರ್ಯರು, ಮತಸ್ಥಾಪಕರು, ಇಲ್ಲಿಗೆ ಬಂದು ತಮ್ಮ ಸಿದ್ಧಾಂತಗಳನ್ನು ಮಂಡಿಸಿದ್ದಾರೆ, ಶಾಸ್ತ್ರಾರ್ಥದಲ್ಲಿ ಪಾಲ್ಗೊಂಡಿದ್ದಾರೆ. ಮಠ-ಮಂದಿರ ಕಟ್ಟಿಸಿ ತಮ್ಮ ಹಿಂಬಾಲಕರನ್ನೂ ಬೆಳೆಸಿದ್ದಾರೆ. ಹೊಸ ಪರಂಪರೆಯನ್ನೇ ಶುರುಮಾಡಿದ್ದಾರೆ. ಇವರುಗಳಲ್ಲಿ ನಾಲ್ಕು ತೀರ್ಥಂಕರರು (ಸುಪಾಶ್ರ್ವನಾಥ, ಚಂದ್ರಪ್ರಭ, ಶ್ರೇಯಾಂಸನಾಥ, ಪಾಶ್ರ್ವನಾಥ), ಮಧ್ವಾಚಾರ್ಯ, ವಲ್ಲಭಾಚಾರ್ಯ, ಚೈತನ್ಯ, ರಾಮಾನಂದಾಚಾರ್ಯ, ಕಬೀರ, ತುಳಸೀದಾಸ, ಮುಂತಾದವರನೇಕರನ್ನು ಹೆಸರಿಸಬಹುದು. ಇದೇರೀತಿ ಸಂತರನೇಕರಲ್ಲಿ ಬಾಬಾ ಕೀನಾರಾಮ್, ತೈಲಂಗ ಸ್ವಾಮಿ, ಸ್ವಾಮಿ ವಿಶುದ್ಧಾನಂದ ಸರಸ್ವತಿ, ಕರಪಾತ್ರೀಜಿ, ಮಾತಾ ಆನಂದಮಯಿ, ಶ್ಯಾಮಾಚರಣ ಲಹರಿ ಮುಂತಾದ ಎಷ್ಟೋ ಜನ ಇಲ್ಲಿ ಸಾಧನೆ ಮಾಡಿದ್ದಾರೆ, ತಮ್ಮ ಮಹಿಮೆ-ಪವಾಡಗಳಿಂದ ಪಾಮರರನ್ನು ಸರಿದಾರಿಗೆ ಎಳೆದಿದ್ದಾರೆ. ಇದಲ್ಲದೆ ವ್ಯಾಪಾರ-ವ್ಯವಹಾರವು ಅನೇಕ ವ್ಯಾಪಾರಿಗಳನ್ನೂ, ಕಲೆ-ಸಂಗೀತ-ಸಾಹಿತ್ಯವು ಅನೇಕ ಕಲಾಕಾರರನ್ನೂ ಕಾಶಿ ಆಕರ್ಷಿಸುತ್ತಲೇ ಇದೆ. ಒಂದು ವಿಚಿತ್ರವೆಂದರೆ, ಯಾರೇ/ಏನೇ ಇಲ್ಲಿಗೆ ಬಂದು ನಿಲ್ಲಲಿ, ಅವರು ಪಂಡಿತರೋ, ಪಾಮರರೋ, ಪಂಡಾಗಳೋ, ಪಾನ್, ಘರಾನಾಗಳೋ, ರೇಷ್ಮೇಯೋ, ನಕ್ಷೆಯೋ ..............ಎಲ್ಲವೂ 'ಬನಾರಸಿ' ಎಂಬ ಹೊಸ ಮೆರುಗು ಹೊದ್ದು ಪರಕೀಯತೆ ತೊರೆದು ಇಲ್ಲಿಯದೇ ಆಗಿ ಬಿಡುತ್ತವೆ.............ಎಲ್ಲ ನದಿಗಳೂ ಸಮುದ್ರದಲ್ಲಿ ಸೇರಿ ಒಂದೇ ಆಗುವಂತೆ. ಹೀಗೆ ನೋಡಿದಾಗ ಕಾಶಿ ಒಂದು ಮಿನಿಭಾರತ. ಇಲ್ಲಿ ಇಡಿ ಭಾರತವೇ-ಭಾರತದ ಜನಸಮೂಹ, ಸಂಸ್ಕøತಿಯೇ-ಸಂಗ್ರಹವಾಗಿ ಅಡಕವಾಗಿರುವುದೇ ಅಲ್ಲದೆ ಸಹಸ್ರಾರು ವರ್ಷಗಳ ಪರಂಪರೆಗಳೂ ಜೊತೆ ಜೊತೆಗೆ ಉಳಿದು ನಿಂತಿವೆ! ಇಂಥಹ ಆಕರ್ಷಣೀಯ ಕಾಶಿಯನ್ನು ನೋಡಿಯೆ ಏನೋ ವಾಮನ ಪುರಾಣ “ನ ತಾದ್ರುಶಮ್ ಹಿ ಗಗನೆ, ನ ಭೂಮ್ಯಾಮ್, ನ ರಸಾತಲೆ” (ಇದರಂತೆ ಭೂಮ್ಯಾಕಾಶ ಪಾತಾಳಗಳಲ್ಲೂ ಇನ್ನೊಂದಿಲ್ಲ) ಎಂದು ಆಶ್ಚರ್ಯದಿಂದ ಹೇಳುತ್ತದೆ. ಗಂಗೆ ಸಹ ಕಾಶಿಯ ಆಕರ್ಷಣೆಗೆ ಮನಸೋತು ತನ್ನನ್ನೂ ತಾನೇ ಮರೆತು, ಉತ್ತರದಿಂದ ದಕ್ಷಿಣ-ಪೂರ್ವಕ್ಕೆ ಹರಿಯುವ ಬದಲು, ಇಲ್ಲಿ ಉತ್ತರಕ್ಕೆ ಹರಿಯಲು ಶುರುಮಾಡಿದಳು! ಹೀಗಿರುವಾಗ, ಪ್ರತಿಯೊಬ್ಬ ಹಿಂದೂವಿನ ಮನಸ್ಸಿನಲ್ಲೂ “ಜೀವನದಲ್ಲಿ ಒಮ್ಮೆಯಾದರೂ ಕಾಶಿಯಾತ್ರೆ ಮಾಡಲೇ ಬೇಕು, ಸಾಧ್ಯವಾದರೆ ಕಾಶಿವಾಸ ಮಾಡಿ, ಅಲ್ಲೇ ಪ್ರಾಣ ತ್ಯಾಗಮಾಡಿ ಮುಕ್ತಿ ಗಳಿಸಬೇಕು” ಎಂಬ ಆಸೆ ಅಂತರಾಳದಲ್ಲೆಲ್ಲೋ ಹುದುಗಿದ್ದರೆ ಆಶ್ಚರ್ಯವೇನು?

 

(ಕೆ. ಚಂದ್ರಮೌಳಿ)

 

 

 